ಕಾಯುತಿಹಳು ಮಾಧವಿ

ಓರೆಗಣ್ಣ ನೋಟದಲ್ಲಿ
ಮುಖದ ತುಂಬಾ ನಗುವ ಚೆಲ್ಲಿ
ತನ್ನಿನಿಯನ ಆಗಮನಕೆ
ಕಾಯುತಿಹಳು ಮಾಧವಿ

ತಾನೋದಿದ ಕವಿತೆಯಲ್ಲಿ
ಬರೆದ ನೂರು ಬರಹದಲ್ಲಿ
ಕಂಡ ಕನಸ ನೆನಪಿನಲ್ಲಿ
ಅವನ ಹುಡುಕುತಿರುವಳು

ಮೊಗದಲೊಂದು ಸಣ್ಣ ಬೊಟ್ಟು
ಜರಿಯಂಚಿನ ಸೀರೆಯುಟ್ಟು
ಕಾಲ್ಗೆಜ್ಜೆಯ ಸದ್ದ ಮಾಡುತ
ಕುಳಿತಿಹಳು ಅವನ ಕಾಯುತ

ನೀಲ ಗಗನದಂಚಿನಿಂದ
ತಂಪೆರೆಯುವ ಮಳೆಯಂತೆ
ನಿನ್ನೆಡೆಗೆ ಬರುವನವನು
ಕಾಯುತಿರು ನೀ ಮಾಧವಿ.

ಚಿತ್ರ ಕೃಪೆ :vishnu108.deviantart.com

Advertisements

ಕಣಿಪುರೇಶನ ಸನ್ನಿಧಿಯಲ್ಲಿ

ಕೃಷ್ಣನೆಂದರೆ ನನಗೇನೋ ಒಂದು ಆಕರ್ಷಣೆ.  ಭಕ್ತಿ ಅನ್ನುವುದಕ್ಕಿಂತ ಒಬ್ಬ ಗೆಳೆಯನೆಡೆಗಿರುವ ನಿಷ್ಕಲ್ಮಶ ಪ್ರೀತಿ. ಅದು ಚಿಕ್ಕವನಿರುವಾಗ ಬಾಲಕೃಷ್ಣನ ಹತ್ತಾರು ಪುಸ್ತಕಗಳನ್ನು ಓದಿದ ಫಲವಿರಬಹುದು.  ಹಾಗೆಯೇ ಇನ್ನೊಂದು ಕಾರಣ ಎಂದರೆ ಕಣಿಪುರ ಶ್ರೀ ಗೋಪಾಲಕೃಷ್ಣನ ದೇವಾಲಯ. ಕಾಸರಗೋಡಿನ ಕುಂಬಳೆಯಲ್ಲಿರುವ ಪ್ರಸಿದ್ಧ ದೇವಸ್ಥಾನವದು. ಅದರ ಒಳ ಹೊಕ್ಕರೆ ನನಗೆ ನನ್ನ ಗೆಳೆಯನ ಮನೆಗೆ ಹೋದಂತ ಅನುಭವ. ಆ ಭವ್ಯ ಗುಡಿಯ ನಡುವೆ ನಿಂತಿರುವ ಗೋಪಾಲಕೃಷ್ಣನ ಮೂರ್ತಿಯನ್ನ ನೋಡಿದಾಗ ಮನದ ತುಂಬಾ ಆನಂದದ ಅಲೆಗಳು ತೇಲಿ ಬಂದ ಅನುಭವ. ಆತನ ಗುಡಿಗೆ ಮೂರು ಪ್ರದಕ್ಷಿಣೆ ಬಂದು ಆತನಿಗೆದುರಾಗಿ ಕಣ್ಣು ಮುಚ್ಚಿ ಕುಳಿತಾಗ ಇಡಿಯ ಜಗತ್ತೇ ನಿಶ್ಚಲವಾದ ಅನುಭವ. 

ಹಾಗೆ ಕಣ್ಣು ಮುಚ್ಚಿ ಕುಳಿತ ನಾನು ಕೇಳುವುದು ಒಂದೇ ಕೋರಿಕೆ. ನನ್ನ ಜೀವನದಲ್ಲಿ ಸುಖವಿರಲಿ ಕಷ್ಟವಿರಲಿ, ಏನೇ ಆದರೂ ಮುಖದ ತುಂಬಾ ಮುಗುಳ್ನಗು ಹೊತ್ತು ಬದುಕುವ ಧೈರ್ಯವನ್ನು ನೀಡು ಅಂತ. ಸಮಯದ ಪರಿವೇ ಇಲ್ಲದೆ ಕೂತ ನನ್ನನ್ನು ಎಚ್ಚರಿಸುವುದು ಮಹಾಮಂಗಳಾರತಿಯ ಸಮಯದ ಗಂಟೆಯ ನಿನಾದ. ಕಣ್ಣು ತೆರೆದರೆ ಎದುರಿಗೆ ಸರ್ವಾಲಂಕಾರ ಭೂಷಿತ ಕೃಷ್ಣ ಸಾಲು ಸಾಲು ದೀಪಗಳ ನಡುವೆ ಕಂಗೊಳಿಸುತ್ತಿರುತ್ತಾನೆ.  ಆತನ ಪದತಲದಲ್ಲಿ ಕುಳಿತ ಅಡಿಗರು, ಆರತಿಯನ್ನ ಬೆಳಗುತ್ತಿದ್ದರೆ, ಅದರ ಬೆಳಕಿನಲ್ಲಿ ಕಾಣುವ ಅವನ ಮುಖ ಯಾವ ವರ್ಣನೆಗೂ ನಿಲುಕದ್ದು. ಹಾಗೆ ಆರತಿ ಬೆಳಗಿದ ಅಡಿಗರು ಹೊರಗೆ ಬಂದು ಪ್ರಸಾದ ನೀಡಿದಾಗ, ಅವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದಾಗ, ಸಾಕ್ಷಾತ್ ಕೃಷ್ಣನ ಪಾದಸ್ಪರ್ಶವನ್ನು ಮಾಡಿದ ಅನುಭವ ದೊರೆಯುತ್ತದೆ. ಯಾಕಂದ್ರೆ ಶ್ರೀಕೃಷ್ಣನೇ ಹೇಳಿದಂತೆ “ಯಾರು ನನ್ನನ್ನು ನಿಶ್ಕಲ್ಮಷ ಭಕ್ತಿಯಿಂದ ಪೂಜಿಸುತ್ತಾರೋ, ಅಂತಹ ಭಕ್ತರ ಆಶೀರ್ವಾದದಷ್ಟು ಶ್ರೇಷ್ಠವಾದುದು ಮತ್ತೊಂದಿಲ್ಲ” ಅಂತ. 
ಹಾಗೆ ಅಲ್ಲಿ ಪೂಜಾ ಕೈಂಕರ್ಯವನ್ನು ನಡೆಸುವವರಲ್ಲಿ ಕುಂಬಳೆಯ ಅಡಿಗರ ಮನೆತನದ ಶ್ರೀಯುತ ಕೇಶವ ಅಡಿಗರು ಒಬ್ಬರು. ಮೊದಲ ಬಾರಿಗೆ ಅವರನ್ನ ನಾನು ನೋಡಿದ್ದು ನನ್ನೂರಿನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮವಾಹಕರಾಗಿ. ಶ್ರೀ ದೇವರ ಅವಭೃತ ಸ್ನಾನಕ್ಕೆ ಸುಮಾರು 16 ಕಿಮೀ ದೂರದ ಕುಮಾರಧಾರ ನದಿಗೆ ನನ್ನ ತಂದೆಯೊಂದಿಗೆ ನಾನು ಚಿಕ್ಕವನಿರುವಾಗಲೇ ಹೋಗುತ್ತಿದ್ದೆ. ಅಲ್ಲಿ ಶ್ರೀ ದೇವರ ಅವಭೃತ ಸ್ನಾನದ ನಂತರ ಉತ್ಸವ ಮೂರ್ತಿಯನ್ನು ಹೊತ್ತು ಬರುತ್ತಿದ್ದುದು ಕೇಶವ ಅಡಿಗರು. ಕಲ್ಲು ಮುಳ್ಳು ಹಾಗು ಬಿಸಿಯೇರಿದ ಟಾರು ರಸ್ತೆಯಲ್ಲಿ ಶ್ರೀ ದೇವರ ಮೂರ್ತಿಯನ್ನು ಹೊತ್ತು ಬರುತ್ತಿದ್ದರೆ, ನನ್ನ ಪುಟ್ಟ ಮನದೊಳಗೆ ಅದ್ಭುತದಂತೆ ಗೋಚರವಾಗುತ್ತಿದ್ದರು ಅವರು. ಅವರನ್ನು ನೋಡಿದಾಗ ಶಿವನನ್ನು ತಲೆಯ ಮೇಲೆ ಹೊತ್ತ ಕೃಷ್ಣನಂತೆ ಕಾಣುತ್ತಿದ್ದರು. ವಿಷ್ಣು ಹಾಗು ಶಿವ ಇಬ್ಬರನ್ನೂ ಜೊತೆಗೆ ನೋಡಿದ ಅನುಭವ ದೊರೆಯುತ್ತಿತ್ತು. 
ಪ್ರತೀ ಬಾರಿಯೂ ಕುಂಬಳೆ ದೇವಾಲಯಕ್ಕೆ ಹೋದಾಗ ಗೋಪಾಲಕೃಷ್ಣನ ದರ್ಶನದೊಂದಿಗೆ ಅಡಿಗರನ್ನೂ ಭೇಟಿ ಮಾಡಲು ಹಾತೊರೆಯುತ್ತಿರುತ್ತೇನೆ. ಕುಂಬಳೆ ದೇವಸ್ಥಾನದಲ್ಲಿ ನನಗೆ ಇನ್ನೊಂದು ಪ್ರೀತಿಯ ವಸ್ತು ಅಂದರೆ ಶ್ರೀ ದೇವರ ಪ್ರಸಾದವಾದ ಹಾಲು ಪಾಯಸ. ಜಗತ್ತಿನಲ್ಲಿ ಬೇರೆಲ್ಲೂ ಅಷ್ಟು ಅದ್ಭುತ ಪರಮಾನ್ನ ದೊರಕಲು ಸಾಧ್ಯವಿಲ್ಲ. ಬಾಳೆ ಎಲೆಯ ಮುಂದೆ ಕುಳಿತು ಊಟ ಮಾಡಿ, ಕೊನೆಗೆ ಹಾಲು ಪಾಯಸವನ್ನು ಸವಿದಾಗ ಮೂಡುವ ಭಾವ ಕಲ್ಪನೆಗೂ ನಿಲುಕದ್ದು. ಮತ್ತೆ ಮತ್ತೆ ನಿನ್ನ ಈ ಮನೆಗೆ ಕರೆಸುತ್ತಿರು ಅನ್ನುವ ಕೋರಿಕೆಯೊಂದಿಗೆ ಅಲ್ಲಿಂದ ಹೊರಟಾಗ, ಆತ್ಮೀಯ ಗೆಳೆಯನ ಮನೆಯಿಂದ ಹೊರಟಂತಹ ಅನುಭವ ಮನದ ತುಂಬಾ ತುಂಬಿರುತ್ತದೆ.
ಚಿತ್ರ ಕೃಪೆ:kanipura. org

ಗೋಪಾಲನ ಜೊತೆಯಲ್ಲಿ

ಎಂದಿನಂತೆ ಮಾಧವ ಮನೆಯ ಮುಂದಿನ ಅಂಗಳದಲ್ಲಿ ಒಬ್ಬನೇ ಆಟವಾಡುತ್ತಿದ್ದ. ತಕ್ಷಣ ಆತನಿಗೆ ಗೆಳೆಯ ಕೃಷ್ಣನ ನೆನಪಾಯಿತು. ಕರೆದ ಕೂಡಲೆ ಬರುವೆ ಅಂತ ಅಂದಿದ್ದ ಕೃಷ್ಣ. ನೋಡೇ ಬಿಡೋಣ ಅಂತ ‘ಕೃಷ್ಣಾ’ ಅಂತ ಕೂಗಿದ. ಆತನ ಧ್ವನಿ ಆ ಪರಿಸರದ ತುಂಬಾ ಪ್ರತಿಧ್ವನಿಸಿತು. ಆ ಕ್ಷಣದಲ್ಲೇ ದಿಗಂತದಂಚಿನಿಂದ ಗೋವುಗಳ ಹಿಂಡಿನೊಂದಿಗೆ ಇವನತ್ತಲೇ ನಡೆದು ಬಂದ ಕೃಷ್ಣ. ಬಿಸಿಲಿಗೆ ಬೆವೆತ ಕೃಷ್ಣನ ಮುಖದ ತುಂಬಾ ಮುತ್ತಿನಂತೆ ಹರಡಿತ್ತು ಬೆವರ ಹನಿ.
“ಏನೋ ಮಾಧು ನನ್ನ ಕರೆದೆಯಲ್ಲ” ಅಂತನ್ನುತ್ತಾ ನಡೆದು ಬಂದ ಕೃಷ್ಣ. 
“ಒಬ್ಬನೇ ಆಡುತ್ತಿದ್ದೆ, ಅದಕ್ಕೆ ನಿನ್ನ ಕರೆದೆ”

“ಓಹೋ ಹಾಗಾದರೆ ಜೊತೆಯಲ್ಲಿ ಆಡೋಣ ಬಾ” ಎನ್ನುತ್ತ ತನ್ನ ಗೋವುಗಳ ಹಿಂಡಿನೆಡೆಗೆ ಮಾಧುವನ್ನ ಕರೆದೊಯ್ದ.

ಕೃಷ್ಣನತ್ತಲೇ ದೃಷ್ಟಿ ನೆಟ್ಟು ನಿಂತಿದ್ದ ನೂರಾರು ದನ ಕರುಗಳನ್ನು ನೋಡಿದ ಮಾಧು “ಅದು ಹೇಗೆ ಇಷ್ಟೊಂದು ಗೋವುಗಳನ್ನ ನೀನೊಬ್ಬನೇ ನೋಡಿಕೊಳ್ತೀಯ”? ಅಂತ ಕೇಳಿದ.

“ಇವರೆಲ್ಲಾ ನನ್ನ ಕುಟುಂಬದಂತೆ. ಹಸಿದಾಗ ಇದೇ ಗೋಮಾತೆಯ ಹಾಲನ್ನ ಕುಡಿದು ಬೆಳೆದವ ನಾನು. ಆ ಕ್ಷೀರದಿಂದ ಮಾಡಿದ ಬೆಣ್ಣೆಯನ್ನ ಗಡಿಗೆ ಒಡೆದು ಕದ್ದು ತಿಂದವ ನಾನು. ಇದೇ ಕರುಗಳೊಡನೆ ಆಡಿ ಬೆಳೆದವ ನಾನು. ಹೀಗೆ ನನ್ನದು ಎಂಬ ಈ ದೇಹ ಆ ಗೋಮಾತೆಯ ಫಲ”

“ಹಾಗಾದರೆ ನಾನು ದಿನಾಲೂ ಊಟ ಮಾಡೋದು ಅನ್ನವನ್ನ. ಅದನ್ನೂ ಕೂಡ ಅವಳೇ ಕೊಟ್ಟಿದ್ದು ಅಂತ ಹೇಳ್ತೀಯಾ”? ಅಂತ ಮುಗ್ಧವಾಗಿ ಪ್ರಶ್ನಿಸಿದ ಮಾಧು.
” ಹೌದು ಮಾಧು, ಅಕ್ಕಿಯನ್ನ ಬೆಳೆಯುವ ಈ ಭೂಮಿಯ ಒಡಲನ್ನ ಫಲವತ್ತನ್ನಾಗಿ ಮಾಡುವುದು ಗೋವುಗಳು. ನೆಲವನ್ನ ಉತ್ತು ಅದರೊಳಗಿಂದ ಭತ್ತದ ಚಿಗುರೊಡೆಯುವಂತೆ ಮಾಡುವುದು ಗೋವು”
“ಅದು ಸರಿ ನೀನ್ಯಾಕೆ ಈ ಗೋಪಾಲಕನ ಕೆಲಸ ಮಾಡ್ತಿದ್ದೀಯಾ. ಬೇರೆ ಯಾವುದಾದರು ಧನಲಾಭದ ಕೆಲಸ ಮಾಡಬಹುದಲ್ಲಾ”
” ಅಯ್ಯೋ ಮಾಧು, ಗೋವಿಗಿಂತ ದೊಡ್ಡ ಸಂಪತ್ತು ಈ ಜಗತ್ತಿನಲ್ಲಿ ಮತ್ಯಾವುದೂ ಇಲ್ಲ. ಗೋವಿನ ಪಾಲನೆಗಿಂತ ಪುಣ್ಯ ಕೆಲಸ ಮತ್ತೊಂದಿಲ್ಲ. ಗೋದಾನಕ್ಕಿಂತ ಮಹತ್ತರವಾದುದು ಇನ್ನೊಂದಿಲ್ಲ” ಅಂತ ಮುಗುಳ್ನಗುತ್ತಾ ಉತ್ತರಿಸಿದ ಕೃಷ್ಣ.

  “ಹೌದು ಕೃಷ್ಣ, ನನ್ನಮ್ಮ ಹೇಳುತ್ತಿದ್ದ ಕಾಮಧೇನುವಿನ ಕಥೆ ನನಗೀಗಲೂ ನೆನಪಿದೆ. ಸಜ್ಜನರಿಗೆ ಬಯಸಿದ್ದನ್ನು ನೀಡುವ ಆಕೆ ಎಲ್ಲಾ ದೇವರ ಆವಾಸ ಸ್ಥಾನ ಅಂತ ಅಮ್ಮ ಹೇಳುತ್ತಿದ್ದರು”

” ಗೋವಿನ ದೇಹದ ಪ್ರತಿಯೊಂದು ಅಂಗವೂ ಪರಿಶುದ್ಧವಾಗಿದೆ. ಗೋಕ್ಷೀರ ಈ ಜಗತ್ತಿನಲ್ಲಿ ಅಮೃತ ಸಮಾನವಾಗಿದೆ. ಸಕಲ ದೇವರ ಆವಾಸ ಸ್ಥಾನವಾಗಿದೆ”

ಹೀಗೆ ಪುಟ್ಟ ಮಾಧುವಿಗೆ ಗೆಳೆಯ ಕೃಷ್ಣನೊಡನೆ ಪ್ರಶ್ನೆಗಳನ್ನ ಕೇಳುವುದೆಂದರೆ ಸಂತೋಷದ ಕ್ಷಣವಾಗಿತ್ತು. ಜಗತ್ತಿನ ಸಕಲ ಚರಾಚರ ವಸ್ತುಗಳ ಒಡೆಯ, ಅವನ ಮುಂದೆ ಗೋಪಾಲಕನಾಗಿ ನಿಂತಿದ್ದ. 
ಕೃಷ್ಣನೊಡನೆ ಮಾತನಾಡುತ್ತಾ , ಕರುಗಳೊಡನೆ ಆಟವಾಡುತ್ತಾ, ಇಡಿಯ ಜಗತ್ತನ್ನೇ ಮರೆತ ಮಾಧುವಿಗೆ ಮನೆಯಿಂದ ಅಮ್ಮ ಕರೆಯುತ್ತಿದ್ದ ಧ್ವನಿ ಕೇಳಿಸಿತು.
” ಅಮ್ಮ ಕರೆಯುತ್ತಿದ್ದಾರೆ, ನಾನು ಹೋಗಬೇಕು. ನಾಳೆ ಮತ್ತೆ ಆಟವಾಡೋಣ” ಅಂದ ಮಾಧು ಮನೆಯ ಕಡೆ ಓಡಿ ಬಿಟ್ಟ.
” ಎಲ್ಲೋ ಹೋಗಿದ್ದೆ ಇಷ್ಟು ಹೊತ್ತು, ತಗೋ ಹಾಲು ಕುಡಿ” ಅಂತ ಅಮ್ಮ ಹಾಲನ್ನ ಕೊಟ್ಟಾಗ ಮಾಧುವಿನ ಮನದಲ್ಲಿ “ನನ್ನದು ಎಂಬ ಈ ದೇಹ ಆ ಗೋಮಾತೆಯ ಫಲ” ಎಂಬ ಕೃಷ್ಣನ ಮಾತು ಪ್ರತಿಧ್ವನಿಸುತ್ತಿತ್ತು.

​PC: Artist Vasudeva Krishna das

ಹಸಿರು ಮನೆ

ನನ್ನ ಮನೆ ಬಗ್ಗೆ ಹೇಳೋದಿಕ್ಕೆ ಏನಿದೆ ಅಂದ್ಕೊಂಡ್ರಾ?ಹೌದು ನನ್ನ ಹುಟ್ಟಿನಿಂದ ಇಲ್ಲಿಯವರೆಗೆ ನನ್ನೆಲ್ಲಾ ಬೆಳವಣಿಗೆಗೆ ಸಾಕ್ಷಿಯೆಂಬಂತೆ ನಿಂತಿದೆ ನನ್ನ ಮನೆ. ನನ್ನ ಬಾಲ್ಯ ಕಾಲದ ತುಂಟಾಟಗಳನ್ನೆಲ್ಲಾ ನಾನು ಮರೆತಿರಬಹುದು. ಆದರೆ ಆ ಕ್ಷಣಗಳನ್ನೆಲ್ಲಾ ನನ್ನ ಮನೆಯ ಪ್ರತೀ ಮೂಲೆಯೂ ಹಿಡಿದಿಟ್ಟಿದೆ.

ನನ್ನ ಮನೆಯೇನು ಎರಡು ಮೂರು ಅಂತಸ್ತಿನ ಕಾಂಕ್ರೀಟ್ ಕಟ್ಟಡವಲ್ಲ. ಹತ್ತಾರು ಮರಗಳ ನಡುವೆ ಬಚ್ಚಿಟ್ಟು ಕುಳಿತ ಹೆಂಚಿನ ಮನೆ. ಈವಾಗ್ಲೂ ನಾನದನ್ನ ಕರೆಯೋದು ‘ಹಸಿರು ಮನೆ’ ಅಂತಾನೆ. ಬಿರು ಬೇಸಗೆಯಲ್ಲಿ ಬೆವರೊರೆಸುತ್ತಾ ಒಳ ಹೊಕ್ಕರೆ, ಹಂಚಿನ ಮನೆಯ ತಣ್ಣನೆಯ ಗಾಳಿ ನಿಮ್ಮನ್ನ ಸ್ವಾಗತಿಸುತ್ತದೆ. ಇನ್ನೂ ನಿಮ್ಮ ಬಿಸಿ ಆರದಿದ್ದರೆ ಹಿತ್ತಲ ಮೂಲೆಯ ತೆರೆದ ಬಾವಿಯಿಂದ ತಂದ ನೀರು ಅಮೃತದಂತೆ ನಿಮ್ಮ ದಾಹವನ್ನ ತಣಿಸುತ್ತದೆ.
ನನ್ನ ಬಾಲ್ಯ ಕಾಲದ ತುಂಟಾಟಗಳಿಗೆಲ್ಲಾ ವಸ್ತು ಈ ಮನೆಯೇ. ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಿಲ್ಲಲು ಹವಣಿಸುತ್ತದ್ದ ನನಗೆ ಆಸರೆಯಾಗಿದ್ದು ಮನೆಯ ಗೋಡೆಗಳು. ಇನ್ನೂ ಎತ್ತರಕ್ಕೆ ಏರಬೇಕೆಂಬ ಅದಮ್ಯ ಆಸೆಗೆ ನೀರೆರೆದದ್ದು ಅಟ್ಟದೆಡೆಗೆ ಚಾಚಿ ನಿಂತಿದ್ದ ಮರದ ಏಣಿ. ಹಾಗೇ ಏರುತ್ತಾ ಮನೆಯ ಹೆಂಚಿನ ತುದಿಯಲ್ಲಿ ನಿಂತಿದ್ದ ಟಿವಿಯ ಆಂಟೆನಾದ ಬುಡ ತಲುಪಿದ ಕೂಡಲೆ ಎವರೆಸ್ಟ್ ಪರ್ವತದ ಶಿಖರವನ್ನ ತಲುಪಿದ ಅನುಭವ ನನಗಾಗುತ್ತಿತ್ತು. 

ಇನ್ನು ನೆರೆಹೊರೆಯ ಮಕ್ಕಳೆಲ್ಲಾ ಕೂಡಿದರೆ ನಮ್ಮ ಸವಾರಿ ಹೊರಡುತ್ತಿದ್ದುದು ಸೀದಾ ಅಟ್ಟದೆಡೆಗೆ. ಅದೊಂತರಾ ಕೇಳಿದ್ದನ್ನು ನೀಡುವ ಅಲ್ಲಾವುದ್ದೀನನ ದೀಪದಂತೆ ಭಾಸವಾಗುತ್ತಿತ್ತು ನಮಗೆ. ಆ ಕತ್ತಲ ಗೂಡಿನೊಳಗೆ ಹೆಂಚಿನೆಡೆಯಿಂದ ತೂರಿ ಬರುವ ಸೂರ್ಯ ರಶ್ಮಿಯ ಬೆಳಕಿನಲ್ಲಿ ಹಳೆಯ ವಸ್ತುಗಳನ್ನೆಲ್ಲಾ ತಡಕಾಡುವುದೇ ನಮ್ಮ ಕಾಯಕವಾಗಿತ್ತು. 

ಇನ್ನು ಮಳೆಗಾಲ ಬಂತಂದ್ರೆ ಇಡೀ ಪರಿಸರದ ರೂಪವೇ ಬದಲಾಗುತ್ತಿತ್ತು. ಮನೆಯ ಸುತ್ತೆಲ್ಲಾ ಹಸಿರು ತುಂಬಿ ಕಣ್ಣಿಗೆ ತಂಪೆರೆಯುತ್ತಿತ್ತು. ಹೊರಗಡೆ ತುಂಬಾ ತಂಪಾದಾಗ ಮನೆಯೊಳಗೆ ಬೆಚ್ಚನೆಯ ಅನುಭವ. ಕೆಂಪಗಿನ ಕೆಂಡವನ್ನ ಒಡಲಲ್ಲಿ ತುಂಬಿಕೊಂಡ ಒಲೆಯ ಮುಂದೆ ಕೂತು ಹಪ್ಪಳವನ್ನ ಸುಟ್ಟು ತಿನ್ನಲು ನಾವು ಮಕ್ಕಳೆಲ್ಲಾ ನಾಮುಂದು ತಾಮುಂದು ಅಂತ ಓಡೋಡಿ ಬರುತ್ತಿದ್ದೆವು. ಕೆಂಪಗಿನ ಬಣ್ಣ ಬಳಿದ ನೆಲದ ಮೇಲೆ ಕೂತು ಉಣ್ಣುವಾಗ ಅಮ್ಮ ಮಾಡಿದ ಅಡುಗೆಯೆಲ್ಲಾ ಹೊಟ್ಟೆ ಸೇರಿದ್ದೇ ತಿಳಿಯುತ್ತಿರಲಿಲ್ಲ. 
ವಿಶಾಲವಾದ ಅಂಗಳದ ತುಂಬಾ ಅಡಿಕೆಯ ರಾಶಿ ಹರಡಿದ್ದರೂ ನಮ್ಮ ಆಟಕ್ಕೇನೂ ಕೊರತೆಯಿರಲಿಲ್ಲ. ಲಗೋರಿ, ಕ್ರಿಕೆಟ್, ಕಬಡಿ ಹೀಗೆ ತರಹೇವಾರಿ ಆಟಗಳನ್ನ ಮಕ್ಕಳೆಲ್ಲಾ ಕೂಡಿ ಆಡುತ್ತಿದ್ದೆವು.
ಬೆಳೆಯುತ್ತಾ ಒಮ್ಮೆಲೆ ಹೊರ ಜಗತ್ತಿನ ಬಣ್ಣ ಬಣ್ಣದ ಮಹಡಿಯ ಮನೆಗಳನ್ನು ಕಂಡಾಗ, ನನಗೂ ಈ ತರಹದ ತಾರಸಿಯ ಕಾಂಕ್ರೀಟ್ ಮನೆ ಇದ್ರೆ ಚೆನ್ನಾಗಿತ್ತು ಅಂದುಕೊಂಡಿದ್ದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗಲೆ ಅದರ ಅಸಲಿ ಬಣ್ಣ ತಿಳಿದದ್ದು. ಬೇಸಿಗೆಯ ಬಿಸಿಗೆ ಇನ್ನಷ್ಷು ಕಾವೆರೆಯುವ ಕಟ್ಟಡಕ್ಕಿಂತ, ತಂಪೆರೆಯುವ ನನ್ನ ಮನೆಯೇ ಲೇಸು. ಎತ್ತ ನೋಡಿದರು ವಿಷಗಾಳಿ ಬೀರುವ ಷಹರದ ಮಹಡಿ ಮನೆಗಿಂತ, ಸುತ್ತಲೂ ಹಸಿರು ಹೊದ್ದುಕೊಂಡು ಶುದ್ಧ ವಾಯುವಿನ ನನ್ನೆದೆಗೆ ಬೀರುತ್ತಿದೆ ನನ್ನ ಮನೆ.
ಹೀಗೆ ನನ್ನ ಮನೆಯೆಂಬುದು ನೂರಾರು ಬದಲಾವಣೆಗಳಿಗೆ ಒಗ್ಗಿಕೊಂಡು, ತನ್ನತನವನ್ನ ಉಳಿಸಿಕೊಂಡು, ನನ್ನ ಜೀವನದ ಮೊದಲ ಪಾಠಶಾಲೆಯಾಗಿ, ಮಾನವ ನಿರ್ಮಿತ ವಸ್ತುಗಳು ನಿಸರ್ಗದೊಂದಿಗೆ ಒಂದಾದರೆ ಮಾತ್ರ ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಸಂತೋಷದಿಂದ ಬದುಕಬಹುದು ಅನ್ನುವ ಸತ್ಯವನ್ನ ಕಲಿಸಿದೆ.